ಸಿನಿಮಾ ಗೆದ್ದ ಸಂಭ್ರಮದಲ್ಲಿ Love Mocktail 3 ಟೀಮ್

ಸಿನಿಮಾ ಗೆದ್ದ ಸಂಭ್ರಮದಲ್ಲಿ Love Mocktail 3 ಟೀಮ್

ಡಾರ್ಲಿಂಗ್ ಕೃಷ್ಣ (Darling Krishna) ನಿರ್ದೇಶನ ಮಾಡಿ, ನಾಯಕನಾಗಿ ನಟಿರುವ ಲವ್ ಮಾಕ್ಟೇಲ್ 3 (Love Mocktail 3) ಇದೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಜಿಟಿ ಮಾಲ್‌ನ ಎಂಎಂಬಿ ಲೆಗೆಸಿಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಮೊದಲ ಆವೃತ್ತಿಯಿಂದ, ಲವ್ ಮಾಕ್ಟೇಲ್ 3ವರೆಗೆ ಡಾರ್ಲಿಂಗ್ ಕೃಷ್ಣ ದಂಪತಿಗೆ ಜೊತೆಯಾದವರೆಲ್ಲ ಹಾಜರಿದ್ದದ್ದು ವಿಶೇಷ. ಈ ಸಕ್ಸಸ್ ಮೀಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ದಂಪತಿ ಸರಣಿ ಗೆಲುವಿಗೆ ಕಾರಣರಾದ ಚಿತ್ರತಂಡಕ್ಕೆ, ಪ್ರಚಾರ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮತ್ತು ಸಮಸ್ತ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲವ್ ಮಾಕ್ಟೇಲ್ 3 ವಿತರಣೆಯ ಜವಾಬ್ದಾರಿಯನ್ನು ನಿರ್ವಹಿಸಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮಾತನಾಡಿ, ‘ಇದು ಈ ವರ್ಷದ ಮೊದಲ ಹಿಟ್ ಚಿತ್ರ. ಡಾರ್ಲಿಂಗ್ ಕೃಷ್ಣ ಬಿಡುಗಡೆಗೂ ಒಂದಷ್ಟು ದಿನಗಳ ಮುಂದೆ ಸಿನಿಮಾ ತೋರಿಸಿದ್ದರು. ಅದಾದ ಬಳಿಕ ಟಾಕ್ಸಿಕ್‌ನಿಂದ ತೆರವಾದ ಜಾಗಕ್ಕೆ ಲವ್ ಮಾಕ್ಟೇಲ್ ಆಗಮಿಸಿತ್ತು. ಪ್ರೇಕ್ಷಕರೆಲ್ಲ ಅತ್ಯುತ್ತಮ ಪ್ರತಿಕ್ರಿಯೆ ನೀಡುವ ಮೂಲಕ ಲವ್ ಮಾಕ್ಟೇಲ್ 3 ಗೆದ್ದಿದೆ. ಯುಎಸ್‌ಎ, ಆಸ್ಟ್ರೇಲಿಯಾ, ಜರ್ಮನಿ ಮುಂತಾದೆಡೆಗಳಲ್ಲಿಯೂ ಭರ್ಜರಿಯಾಗಿಯೇ ಬುಕ್ಕಿಂಗ್ ಓಪನ್ ಆಗಿದೆ’ ಎಂಬ ಶುಭ ಸುದ್ದಿಯನ್ನು ಹಂಚಿಕೊಂಡರು.

ಈ ಸಕ್ಸಸ್ ಮೀಟ್‌ನ ಕೇಂದ್ರ ಬಿಂದುಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಪ್ರಯತ್ನಕ್ಕೆ ಅಮೋಘ ಯಶಸ್ಸು ತಂದುಕೊಟ್ಟವರಿಗೆಲ್ಲ ಜಂಟಿಯಾಗಿ ಧನ್ಯವಾದ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಿಲನಾ ನಾಗರಾಜ್ ಈ ಚಿತ್ರಕ್ಕೆ ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸಿದ, ಡಿಜಿಟಲ್ ಮಾಧ್ಯಮ ಸೇರಿದಂತೆ ಎಲ್ಲೆಡೆ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಹೇಳುತ್ತಲೇ, ಕುಟುಂಬದಂತೆ ಬೆರೆತು ಹೋದ ಚಿತ್ರತಂಡಕ್ಕೂ ಮೆಚ್ಚುಗೆ ಸೂಚಿಸಿದರು. ‘ಪಾರ್ಟ್ 1 ಹಾಗೂ ಎರಡು ಗೆದ್ದಾಗ ಖುಷಿಯಾಗಿತ್ತು. ಆದರೆ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ ಮನದುಂಬಿ ಬಂದಿದೆ’ ಎಂದರು. ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ ‘ನಾವು ತುಂಬಾ ಲೆಕ್ಕಾಚಾರವಿಟ್ಟುಕೊಂಡೇ ಮುಂದುವರೆಯುತ್ತೇವೆ. ಯಾವುದೇ ಮುಲಾಜಿಗೆ ಬಿದ್ದು ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ನಮ್ಮ ತಂಡದಲ್ಲಿರುವವರೆಲ್ಲರೂ ಪಕ್ಕಾ ಪ್ರತಿಭಾವಂತರಾಗಿರುವುದರಿಂದಲೇ ಅವಕಾಶ ಪಡೆದುಕೊಂಡಿದ್ದಾರಷ್ಟೆ. ಅವರ ಪ್ರತಿಭೆಯನ್ನು ನಾವು ಬಳಸಿಕೊಂಡಿದ್ದೇವೆ. ಆದ್ದರಿಂದ ಸಿನಿಮಾ ತಂಡದವರ್‍ಯಾರೂ ನಮಗೆ ಥ್ಯಾಂಕ್ಸ್ ಹೇಳುವ ಹಾಗಿಲ್ಲ’ ಎನ್ನುತ್ತಲೇ ಮುಂದಿನ ದಿನಗಳ್ಲ್ಲಿ ಕ್ರಿಸ್‌ಮೀ ಬ್ಯಾನರಿನಡಿಯಲ್ಲಿ ವರ್ಷಕ್ಕೊಂದು ಸಿನಿಮಾ ಮಾಡುವ ಯೋಜನೆಯಿದೆ ಎಂಬ ಖುಷಿಯ ಸುಳಿವನ್ನೂ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಶಶಾಂಕ್ ‘ಈ ಕಾಲಮಾನದಲ್ಲಿ ಯಾವುದೇ ಸಿನಿಮಾದ ಸಕ್ಸಸ್ ಮೀಟ್ ಎಂಬ ವಿಚಾರವೇ ಹಿತವೆನ್ನಿಸುತ್ತೆ. ಈ ವರ್ಷದ ಆರಂಭದಿಂದ ಒಂದು ರೀತಿಯ ನಿರಾಶದಾಯಕ ವಾತಾವರಣ ಕನ್ನಡ ಚಿತ್ರರಂಗವನ್ನು ಆವರಿಸಿಕೊಂಡಿತ್ತು. ಇಂಥಾ ಹೊತ್ತಿನಲ್ಲಿ ಲವ್ ಮಾಕ್ಟೇಲ್ ಗೆದ್ದಿರುವುದರಿಂದ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತಾಗಿದೆ. ಇದು ಬರೀ ಚಿತ್ರತಂಡದ ಗೆಲುವಲ್ಲ; ಚಿತ್ರರಂಗದ ಗೆಲುವು’ ಎಂದು ಅಭಿಪ್ರಾಯ ಪಟ್ಟರು. ಇದೇ ವೇದಿಕೆಯಲ್ಲಿ ರೆಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ಜಗ ಮಮ್ಮಿ ಎಂದೇ ಖ್ಯಾತರಾದ ಜಗದೀಶ್, ಡಾರ್ಲಿಂಗ್ ಕೃಷ್ಣ ಅವರ ತಂದೆ ನಾಗಪ್ಪ, ಛಾಯಾಗ್ರಾಹಕ ಹಾಗೂ ಸಂಕಲನಕಾರರಾದ ಶ್ರೀ ಕ್ರೇಜಿಮೈಂಡ್ಸ್ ಮುಂತಾದವರು ತನ್ನ ಲವ್ ಮಾಕ್ಟೇಲ್ ಯಾನದ ಬಗ್ಗೆ ರಸವತ್ತಾದ ವಿಚಾರಗಳನ್ನು ಹಂಚಿಕೊಂಡರು.

News Desk Sandalwood Times

Related articles

error: Content is protected !!