Toxic ಬಳಿಕ ‘ಲವ್ ಮಾಕ್ಟೈಲ್ 3’ ರಿಲೀಸ್ ಡೇಟ್ ಚೇಂಜ್- ಮಾ.19ಕ್ಕೆ ಬರಲಿದೆ ಚಿತ್ರ
ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ʻಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಮಾ.19ರಂದು ರಿಲೀಸ್ ಆಗಬೇಕಿದ್ದ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕಕ್ಕೆ ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರವನ್ನುರಿಲೀಸ್ ಮಾಡಲು ಡಾರ್ಲಿಂಗ್ ಕೃಷ್ಣ (Darling Krishna) ಅಣಿಯಾಗಿದ್ದಾರೆ. ಇದು ಸಹಜವಾಗಿ ಕ್ರಿಸ್‌ಮಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗೋ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಸಕಾರಾತ್ಮಕವಾಗಿರುವ ಮುಹೂರ್ತ. ಅಂತಹ ದಿನಾಂಕದಂದು ಟಾಕ್ಸಿಕ್ ಬಿಡುಗಡೆಗೊಳ್ಳದಿದ್ದರೂ, ಅದೇ ದಿನ ಲವ್ ಮಾಕ್ಟೇಲ್ ೩ ಚಿತ್ರವನ್ನು ತೆರೆಗಾಣಿಸಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್ 3 ಚಿತ್ರವನ್ನು ಕೆವಿಎನ್ ಸಂಸ್ಥೆ ವಿತರಿಸುತ್ತಿದೆ. ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದೆ ಹೋಗುತ್ತಲೇ ಲವ್ ಮಾಕ್ಟೇಲ್ 3 ಪಾಲಿಗೆ ಅದೃಷ್ಟ ಖುಲಾಯಿಸಿಕೊಂಡಿದೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂದೇ ಲವ್ ಮಾಕ್ಟೇಲ್ 3 ತೆರೆಗಾಣಲಿದೆ. ಈ ದಿನದಂದೇ ಸಿನಿಮಾ ಬಿಡುಗಡೆಗೊಳಿಸಲು ಅನೇಕರು ಉತ್ಸುಕರಾಗಿದ್ದರು.

ಯಾಕೆಂದರೆ, ಆ ಹೊತ್ತಿನಲ್ಲಿ ಯುಗಾದಿ, ರಂಜಾನ್ ಮುಂತಾದ ಹಬ್ಬಗಳಿಗೆ ಸಾಲು ಸಾಲು ರಜೆಗಳಿದ್ದಾವೆ. ಅಂತಹ ಪ್ರಶಸ್ತವಾದ ಬಿಡುಗಡೆ ಮುತೂರ್ಥವೀಗ ಲವ್ ಮಾಕ್ಟೇಲ್ 3 ಚಿತ್ರಕ್ಕೆ ತಾನೇ ತಾನಾಗಿ ಒಲಿದು ಬಂದಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

