ಹೊಸಬರ ʻಲವ್ ಸೀಸನ್ಸ್’ ಚಿತ್ರದ ಶೂಟಿಂಗ್‌ ಕಂಪ್ಲೀಟ್‌

ಹೊಸಬರ ʻಲವ್ ಸೀಸನ್ಸ್’ ಚಿತ್ರದ ಶೂಟಿಂಗ್‌ ಕಂಪ್ಲೀಟ್‌

ಲ್ಲರ ಬದುಕಿಗೆ ಹತ್ತಿರಾದ ಕಥಾನಕವನ್ನು ನವಿರು ಪ್ರೇಮದ ಪರಿಧಿಯಲ್ಲಿ ಕಟ್ಟಿಕೊಟ್ಟಿರುವ ‘ಲವ್ ಸೀಸನ್ಸ್’ (Love Seasons) ಚಿತ್ರ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ (Kruthavik) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲವ್ ಸೀಸನ್ಸ್’ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿದೆ. ಸಾಮಾನ್ಯವಾಗಿ ಕೆಲ ಸಿನಿಮಾಗಳನ್ನು ನೆಲಮೂಲದ ಕಥೆಯ ಮೂಲಕ ವಿಶೇಷವಾಗಿ ಗುರುತಿಸಲಾಗುತ್ತೆ. ಆದರೆ, ‘ಲವ್ ಸೀಸನ್ಸ್’ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಗಲ್ಲಿ ಗಲ್ಲಿಯ ಕಥೆಯೆಂಬುದು ನಿರ್ದೇಶಕರ ಮಾತು.

ರಂಗಭೂಮಿ ಮತ್ತು ಸಿನಿಮಾ ಜಗತ್ತಿನಲ್ಲಿ ಕಳೆದ ಹತ್ತು ವರ್ಷದಿಂದೀಚೆಗೆ ಕಾರ್ಯ ನಿರ್ವಹಿಸುತ್ತಿರುವವರು ಕೃತ್ವಿಕ್. ಅವರು `ಲವ್ ಸೀಸನ್ಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವಿಶೇಷವೆಂದರೆ, ರಂಗಭೂಮಿ ಹಿನ್ನೆಲೆಯ ಹೊಸಬರಿಂದಲೇ ಈ ಚಿತ್ರ ಕಳೆಗಟ್ಟಿಕೊಂಡಿದೆ. ಮಂಡ್ಯ ರಮೇಶ್ ಸಾರಥ್ಯದ ನಟನಾ ಸಂಸ್ಥೆಯಲ್ಲಿ ಪಳಗಿಕೊಂಡಿರುವ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಗಟ್ಟಿ ಕಥೆ ಮತ್ತು ಈಗಿನ ಕಾಲಕ್ಕೆ ಅಗತ್ಯವಾಗಿರುವ ಸಂದೇಶ ಹೊಂದಿರುವ ಕಥೆಯೊಂದಿಗೆ ನಿರ್ದೇಶಕರು ಈ ಚಿತ್ರವನ್ನು ರೂಪಿಸಿದ್ದಾರಂತೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥಾ ಕಾಲಮಾನ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ ‘ಲವ್ ಸೀಸನ್ಸ್’ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗುತ್ತಿದೆ. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಲೋಕಿ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

News Desk Sandalwood Times

error: Content is protected !!