ಮಾಲಾಶ್ರೀ, ಭೂಮಿ ಶೆಟ್ಟಿ ನಟನೆಯ ‘ಕೆಂಡದ ಸೆರಗು’ ರಿಲೀಸ್ ಡೇಟ್ ಅನೌನ್ಸ್
ರಾಕಿ ಸೋಮ್ಲಿ ನಿರ್ದೇಶಿಸಿರುವ ‘ಕೆಂಡದ ಸೆರಗು’ (Kendada Seragu) ಚಿತ್ರವು ಸಾಮಾಜಿಕ ಸಂದೇಶದೊಂದಿಗೆ ಕ್ರೈಂ ತನಿಖೆಯ ಅಂಶವನ್ನೂ ಒಳಗೊಂಡಿರುವ ವಿಭಿನ್ನ ಕಥೆಯಾಗಿದೆ. ಶ್ರೀ ಮುತ್ತು ಟಾಕೀಸ್ ಬ್ಯಾನರ್‌ನಲ್ಲಿ ಕೋಟ್ರೆಶ್ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ (Malashree) ಮತ್ತು ಭೂಮಿ ಶೆಟ್ಟಿ (Bhoomi Shetty) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭಿತ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್ , ವರ್ಧನ್, ಯಶ್ ಶೆಟ್ಟಿ, ಸಿಂಧೂ ಲೋಕನಾಥ್, ಹರೀಶ್ ಅರಸು ತಾರಾ ಬಳಗದಲ್ಲಿದ್ದಾರೆ. ಈ ಚಿತ್ರ ಏಪ್ರಿಲ್ 17ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಕೆಲವು ಯುವತಿಯರು ಎದುರಿಸುವ ಮೋಸ ಮತ್ತು ಅಪಾಯಗಳನ್ನೂ ತೋರಿಸಲಾಗಿದೆ. ಕಥೆಯ ಒಂದು ಭಾಗದಲ್ಲಿ ಯುವತಿಯೊಬ್ಬಳು ಪ್ರೀತಿಯ ಹೆಸರಿನಲ್ಲಿ ಮೋಸಕ್ಕೆ ಒಳಗಾಗುತ್ತಾಳೆ (ಲವ್ ಜಿಹಾದ್). ತಪ್ಪಾದ ವ್ಯಕ್ತಿಯ ಮೇಲೆ ನಂಬಿಕೆ ಇಡುವುದರಿಂದ ಅವಳ ಜೀವನದ ದಿಕ್ಕೇ ಬದಲಾಗುತ್ತದೆ ಮತ್ತು ಅವಳು ಅನೈತಿಕ ವಲಯದ ಜಾಲದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಅಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರು ಶಕ್ತಿಶಾಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರವೇಶಿಸಿ ಆ ರಾಕೆಟ್ ಅನ್ನು ಬಯಲಿಗೆಳೆಯುವ ಕಾರ್ಯಕ್ಕೆ ಮುಂದಾಗುತ್ತಾರೆ. ಅವರ ಪಾತ್ರವು ಅಪರಾಧ ಜಾಲವನ್ನು ಭೇದಿಸಿ ಸತ್ಯವನ್ನು ಹೊರತರುವ ಹೋರಾಟವನ್ನು ತೋರಿಸುತ್ತದೆ.

ಈ ಚಿತ್ರವು ಮಾಲಾಶ್ರೀ ಅವರ ಮತ್ತೊಂದು ಪ್ರಭಾವಿ ಕಮ್‌ಬ್ಯಾಕ್ ಆಗಿದ್ದು, ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಕ್ವೀನ್ ಎಂಬ ಹೆಸರನ್ನು ಮತ್ತೆ ನೆನಪಿಸುವಂತಿದೆ. ಸಾಮಾಜಿಕ ಸಂದೇಶ, ಭಾವನಾತ್ಮಕ ಕಥೆ ಮತ್ತು ರೋಚಕ ಘಟನೆಗಳ ಸಂಯೋಜನೆಯೊಂದಿಗೆ ಕೆಂಡದ ಸೆರಗು ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟಿಸುವ ಚಿತ್ರವಾಗಲಿದೆ. ವಿಪಿನ್ ಛಾಯಾಗ್ರಹಣ, ವೀರೇಶ್ ಕಂಬಳಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

