ಧನುಷ್ ಜೊತೆಗಿನ ಮದುವೆ ಸುದ್ದಿ ನಿಜನಾ? – ಕೊನೆಗೂ ಉತ್ತರಿಸಿದ ಮೃಣಾಲ್ ಠಾಕೂರ್
ಚಿತ್ರರಂಗದಲ್ಲಿ ಗಾಸಿಪ್ ಕಾಮನ್. ಕಳೆದ ಕೆಲವು ದಿನಗಳಿಂದ ಧನುಷ್ (Dhanush) ಜೊತೆ ಮೃಣಾಲ್ (Mrunal Thakur) ಮದುವೆ ಸುದ್ದಿ ಹರಿದಾಡುತ್ತಿತ್ತು. ಅದಷ್ಟೆ ಅಲ್ಲ, ಧನುಷ್, ನಟಿಯ ಮದುವೆ ಜರುಗಿದೇ ಎನ್ನುವಂತೆ ಬಿಂಬಿಸಿ ಎಐ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಎಲ್ಲಾ ವದಂತಿಗೆ ನಟಿ ಮೃಣಾಲ್ ಬ್ರೇಕ್ ಹಾಕಿದ್ದಾರೆ.

ನನ್ನನ್ನು ನನ್ನ ಕೆಲಸವೇ ಪರಿಚಯಿಸಬೇಕು ಎಂಬ ನಂಬಿಕೆ ನನಗಿದೆ. ಆದರೆ ನಾನು ಆಡದ ಮಾತು, ತೆಗೆದುಕೊಳ್ಳದ ನಿರ್ಧಾರ ಹಾಗೂ ಬರೆಯದ ಕಥೆಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಧನುಷ್ (Dhanush) ನನಗೆ ಸಹೋದರನಂತೆ. ನಮ್ಮ ನಡುವೆ ಇರುವುದು ಪರಸ್ಪರ ಗೌರವ ಮತ್ತು ವೃತ್ತಿಪರ ಸಂಬಂಧವಷ್ಟೇ, ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರ ಸಾಧನೆಗಳನ್ನು ಗುರುತಿಸುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಕಥೆಗಳು ಸೃಷ್ಟಿಯಾಗುತ್ತಿರುವುದು ದುಃಖಕರ ವಿಚಾರ. ನಾನು ಮೌನವಾಗಿರುವುದರ ಅರ್ಥ ಏನು ಮುಚ್ಚಿಡುತ್ತದ್ದೇನೆಂದಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಾರ್ವಜನಿಕ ಅನುಮೋದನೆ ಅಗತ್ಯವಿಲ್ಲವೆಂಬುದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.
ನಟನೆಗೆ ಆಡಿಷನ್, ತಿರಸ್ಕಾರ, ಅನೇಕ ನಿದ್ರೆರಹಿತ ರಾತ್ರಿಗಳು ಹಾಗೂ ಆತ್ಮವಿಶ್ವಾಸದ ಮೂಲಕ ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ. ಆ ಪ್ರಯಾಣವನ್ನು ಊಹಾಪೋಹಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಧ್ವನಿ ನೀಡುತ್ತವೆ, ಆದರೆ, ಅದರೊಂದಿಗೆ ಜವಾಬ್ದಾರಿಯೂ ಅಗತ್ಯ. ಕೆಲವು ಲೈಕ್ಗಳು ಮತ್ತು ಶೇರ್ಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುವ ಕಥೆಗಳನ್ನು ರೂಪಿಸುತ್ತವೆ. ಪ್ರಸ್ತುತ ಹರಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

