ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸೋ ಕನ್ನಡ ಸಿನಿಮಾ ಹಾಡುಗಳು
ಮಕರ ಸಂಕ್ರಾಂತಿ (Makar Sankranti) ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ವರ್ಷದ ಮೊದಲ ಹಬ್ಬ ಇದಾಗಿದ್ದು, ಎಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಮನ ಹಾಗೂ ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.

ಸಂಕ್ರಾಂತಿ ಹಬ್ಬದ ವಿಶೇಷತೆ ಹಾಗೂ ಮಹತ್ವ ಸಾರುವ ಕೆಲಸವನ್ನು ಕನ್ನಡ ಸಿನಿಮಾರಂಗ ಕೂಡ ಮಾಡಿದೆ. ಸಂಕ್ರಾಂತಿ ಕುರಿತ ಸಿನಿಮಾ ಹಾಡುಗಳು ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡಿವೆ. ಇಲ್ಲಿ ಸಂಕ್ರಾಂತಿ ಹಬ್ಬದ ಮೆರಗನ್ನು ಹೆಚ್ಚಿಸುವ ಹಾಡುಗಳ ಪಟ್ಟಿಯನ್ನು ನೀಡಲಾಗಿದೆ.
1. ಹಳ್ಳಿ ಮೇಷ್ಟ್ರು
ಮಕರ ಸಂಕ್ರಾಂತಿ ಅಂದಾಕ್ಷಣ ಥಟ್ ಅಂತ ನೆನಪಾಗೋದು ʻಹಳ್ಳಿ ಮೇಷ್ಟ್ರುʼ ಸಿನಿಮಾದ ʻಸಂಕ್ರಾಂತಿ ಬಂತು ರತ್ತೋ ರತ್ತೋʼ ಹಾಡು. ಹಂಸಲೇಖ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡು ಸಂಕ್ರಾಂತಿ ಹಬ್ಬದ ವಿಶೇಷಗಳನ್ನು ಸಾರುತ್ತದೆ. ಈ ಹಾಡಿನಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಹಾಗೂ ಬಿಂದಿಯಾ ಕಾಣಿಸಿಕೊಂಡಿದ್ದರು.
2.ನೀನಲ್ಲೋ ನಾನಲ್ಲೆ
ಡಾ.ವಿಷ್ಣುವರ್ಧನ್, ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ಅನಿರುದ್ಧ್ ಜಟ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʻನೀನಲ್ಲೋ ನಾನಲ್ಲೆ’ ಸಿನಿಮಾದಲ್ಲೂ ʻಸಂಕ್ರಾಂತಿ ನವರಾತ್ರಿ’ ಎಂಬ ಸುಗ್ಗಿ ಸಂಭ್ರಮವನ್ನು ಬಣ್ಣಿಸುವ ಒಂದು ಹಾಡಿದೆ.

3.ಪಾರ್ಥ
ಕಿಚ್ಚ ಸುದೀಪ್ ಅಭಿನಯದ ʻಪಾರ್ಥ’ ಸಿನಿಮಾದ ʻಸಂಕ್ರಾಂತಿ ಬಂತು ಸುಗ್ಗಿ ತಂತು’ ಹಾಡನ್ನು ಕೂಡ ಹಬ್ಬದಂದು ನೆನಪಿಸಿಕೊಳ್ಳಲೇಬೇಕು. ಈ ಹಾಡಿಗೆ ಗುರುಕಿರಣ್ ಸಂಗೀತ ನೀಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿದ್ದರು.

4. ಆಪ್ತಮಿತ್ರ
ವಿಷ್ಣುವರ್ಧನ್, ರಮೇಶ್ ಅರವಿಂದ್, ಸೌಂದರ್ಯ, ಪ್ರೇಮಾ ನಟನೆಯ ʻಆಪ್ತಮಿತ್ರ’ ಚಿತ್ರದಲ್ಲಿ `ಪಟ ಪಟ ಹಾರೋ ಗಾಳಿಪಟ’ ಸಾಂಗ್ ಸೂಪರ್ ಹಿಟ್ ಆಗಿತ್ತು. ಸಂಕ್ರಾಂತಿ ಹಬ್ಬದ ಕಳೆಯನ್ನು ಹೆಚ್ಚಿಸೋ ಹಾಡು ಇದಾಗಿದೆ. ಈ ಹಾಡನ್ನು ಉದಿತ್ ನಾರಾಯಣ್, ಕೆ.ಎಸ್. ಚಿತ್ರಾ ಹಾಡಿದ್ದರು. ಇಂದಿಗೂ ಈ ಹಾಡಿನ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ.

5.ಚಿಗುರಿದ ಕನಸು
ಶಿವರಾಜ್‌ಕುಮಾರ್, ವಿದ್ಯಾ ವೆಂಕಟೇಶ್ ನಟನೆಯ ʻಚಿಗುರಿದ ಕನಸು’ ಚಿತ್ರದ ಬಂಗಾರದ ತೆನೆ ಸಾಂಗ್ ಸಂಕ್ರಾಂತಿ ಹಬ್ಬದ ಖುಷಿ ಹೆಚ್ಚಿಸುವ ಹಾಡುಗಳಲ್ಲಿ ಒಂದಾಗಿದೆ.

