‘ಲವ್ ಯೂ ಮುದ್ದು’ಗೆ ಜೈ ಎಂದ ಹ್ಯಾಟ್ರಿಕ್ ಹೀರೋ

‘ಲವ್ ಯೂ ಮುದ್ದು’ಗೆ ಜೈ ಎಂದ ಹ್ಯಾಟ್ರಿಕ್ ಹೀರೋ

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಕುಮಾರ್ ನಿರ್ದೇಶನದ ‘ಲವ್ ಯೂ ಮುದ್ದು’ (Love u Muddu) ಚಿತ್ರ ಗೆದ್ದು ಬೀಗಿದೆ. ಸೋಶಿಯಲ್ ಮೀಡಿಯಾ ಮೂಲಕ ಭಾರೀ ಸದ್ದು ಮಾಡಿದ್ದ ಪ್ರೇಮಿಗಳ ನೈಜ ಕಥೆಯನ್ನಾಧರಿಸಿ ಈ ಸಿನಿಮಾ ರೂಪುಗೊಂಡಿತ್ತು. ಭಾಷೆಯ ಗಡಿಯನ್ನು ಮೀರಿಕೊಂಡು ಈ ಕಥನ ಕರುನಾಡ ಸಿನಿಮಾ ಪ್ರೇಮಿಗಳ ಮನ ಗೆದ್ದಿತ್ತು. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ‘ಲವ್ ಯೂ ಮುದ್ದು’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಒಟಿಟಿಯಲ್ಲಿ ಈ ಚಿತ್ರ ನೋಡಿ ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar) ಮೆಚ್ಚಿಕೊಂಡಿದ್ದಾರೆ.

 

View this post on Instagram

 

A post shared by Siddu Moolimani (@sidmoolimani)

ಸದಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ಬೆಂಬಲಿಸುತ್ತಾ, ಸಿನಿಮಾ ತಂಡದ ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಬರುತ್ತಿರುವವರು ಶಿವಣ್ಣ. ಅವರು ʼಲವ್ ಯೂ ಮುದ್ದು’ ಚಿತ್ರವನ್ನು ನೋಡಿ, ನಾಯಕ ಸಿದ್ದುಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಸಮೇತ ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ (Siddu Moolimani), ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಮ್ಮ ತಂಡದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಶಿವಣ್ಣ `ಲವ್ ಯೂ ಮುದ್ದು’ ಚಿತ್ರದ ಬಗ್ಗೆ ಮಾತನಾಡಿ, ಅದು ಮೂಡಿ ಬಂದಿರೋ ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

 

View this post on Instagram

 

A post shared by Love U Muddu (@loveumudduthefilm)

`ಲವ್ ಯೂ ಮುದ್ದು’ ಚಿತ್ರ ತನ್ನ ಕಂಟೆಂಟ್‌ನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಒಂದು ಸತ್ಯ ಕಥೆಯನ್ನು ನೈಜವಾಗಿ ಮನಸಿಗೆ ಸೋಕುವಂತೆ ಕಟ್ಟಿ ಕೊಟ್ಟಿದ್ದ ಕುಮಾರ್ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದರು. ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುವ ಮೂಲಕ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ನಂತರ ಒಟಿಟಿಗೆ ಎಂಟ್ರಿ ಕೊಟ್ಟಿದ್ದ ʼಲವ್ ಯೂ ಮುದ್ದು’ ಅಲ್ಲಿಯೂ ಯಶ ಕಾಣುತ್ತಿದೆ. ಇಂತಹ ಹೊತ್ತಿನಲ್ಲಿ ಶಿವಣ್ಣನ ಮೆಚ್ಚುಗೆಯ ಮಾತುಗಳಿಂದ ಚಿತ್ರತಂಡ ಖುಷಿಗೊಂಡಿದೆ. ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಿಶನ್ ಟಿ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್‌, ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಅವರು ಸಂಗೀತ ನಿರ್ದೇಶನ, ಸಿಎಸ್ ದೀಪು ಸಂಕಲನ ಈ ಚಿತ್ರಕ್ಕಿದೆ.

News Desk Sandalwood Times

error: Content is protected !!