ಒಟಿಟಿಯತ್ತ ಡಾಲಿ- ʻಜೆರಾಕ್ಸ್ʼ ಹೊಸ ಹಾಸ್ಯ ವೆಬ್ ಸರಣಿ ನಿರ್ಮಾಣಕ್ಕೆ ಧನಂಜಯ ಸಾಥ್
ಖ್ಯಾತ ನಟ ಡಾಲಿ ಧನಂಜಯ (Daali Dhananjay) ಅವರು ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ʻಜೆರಾಕ್ಸ್ʼ (Jerax) ಎಂಬ ಹೊಸ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ವೆಬ್ ಸರಣಿಯನ್ನು ಘೋಷಿಸಿದ್ದಾರೆ. ಇದು ಡಾಲಿ ಧನಂಜಯ ಅವರ ಮೊದಲ ಓಟಿಟಿ ನಿರ್ಮಾಣವಾಗಿದೆ.

ZEE5 ಹಾಗೂ ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿ ಬರುತ್ತಿರುವ ಈ ಸರಣಿಯನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ‘ಬ್ಲಿಂಕ್’ ಚಿತ್ರ (Blink) ತನ್ನ ವಿಭಿನ್ನ ಕಥಾವಸ್ತುವಿಗಾಗಿ ಪ್ರಸಿದ್ಧಿ ಪಡೆದು, ಫಿಲಂಫೇರ್ ಪ್ರಶಸ್ತಿಯನ್ನೂ ಗಳಿಸಿತ್ತು. ಇದೀಗ ಅವರು ಜೆರಾಕ್ಸ್ ಮೂಲಕ ಮತ್ತೊಂದು ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಇದು ಅವರ ಮೊದಲ ಓಟಿಟಿ ವೆಬ್ ಸರಣಿಯಾಗಿದೆ.

ಈ ವೆಬ್ ಸರಣಿಯ ಘೋಷಣೆಯೊಂದಿಗೆ ZEE5 ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳನ್ನು ಪ್ರೋತ್ಸಾಹಿಸುವ ವೇದಿಕೆಯಾಗಿ ಪ್ರಸಿದ್ಧವಾಗಿರುವ ಜೀ5, ಇದೀಗ ಜೆರಾಕ್ಸ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ಯುವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮತ್ತು ಡಾಲಿ ಧನಂಜಯ ಅವರ ಸಹಯೋಗವು ಜನರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಸರಣಿಯ ಇನ್ನಷ್ಟು ಮಾಹಿತಿಯನ್ನು ತಂಡವು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.
View this post on Instagram
ಡಾಲಿ ಧನಂಜಯ ಮಾತನಾಡಿ, ಓಟಿಟಿ ವೇದಿಕೆಯಲ್ಲಿ ಇದುವರೆಗೆ ನಾನು ನಿರ್ಮಾಣ ಮಾಡಿರಲಿಲ್ಲ. ಈ ದಿಕ್ಕಿನಲ್ಲಿ ಕೆಲವು ಸಮಯದಿಂದ ಪ್ರಯತ್ನಿಸುತ್ತಿದ್ದೆ. ಸರಿಯಾದ ಕಥೆ ಮತ್ತು ಸೂಕ್ತ ವೇದಿಕೆಯಿಗಾಗಿ ಕಾಯುತ್ತಿದ್ದೆ. ಆಗ ನನಗೆ ‘ಜೆರಾಕ್ಸ್’ ಸಿಕ್ಕಿತು. ನಮ್ಮ ಮಣ್ಣಿನ ಕಥೆಗಳನ್ನು ಹೇಳುವಲ್ಲಿ ಮುಂಚೂಣಿಯಲ್ಲಿರುವ ಜೀ5 ಜೊತೆ ಕೆಲಸ ಮಾಡುವ ಅವಕಾಶ ನನಗೆ ಪ್ರೇರಣೆಯಾಯಿತು. ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನನ್ನ ಆಶಯಕ್ಕೂ ಇದು ಸೂಕ್ತವಾಗಿದೆ. ಈ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಡಲು ನಾನು ತುಂಬಾ ಉತ್ಸುಕನಾಗಿದ್ದೇನೆ.
ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ಡಾರ್ಕ್ ಕಾಮಿಡಿ, ಥ್ರಿಲ್ಲರ್ ಹಾಗೂ ಫ್ಯಾಂಟಸಿ ಅಂಶಗಳೊಂದಿಗೆ ಪ್ರಯೋಗಿಸಲು ‘ಜೆರಾಕ್ಸ್’ ಉತ್ತಮ ಅವಕಾಶ. ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡುವ ಜೀ5 ವೇದಿಕೆ ಈ ಕಥೆಗೆ ಸೂಕ್ತ ವೇದಿಕೆಯಾಗಿದೆ. ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಡಾಲಿ ಪಿಕ್ಚರ್ಸ್ ಜೊತೆ ಕೆಲಸ ಮಾಡುವುದು ನನಗೆ ಇನ್ನಷ್ಟು ಸಂತೋಷ ತಂದಿದೆ ಎಂದು ಹೇಳಿದರು.

