ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್’ ಚಿತ್ರದ ಟೀಸರ್‌ ಔಟ್- ಪ್ರಜ್ವಲ್ ದೇವರಾಜ್ ಸಾಥ್

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್’ ಚಿತ್ರದ ಟೀಸರ್‌ ಔಟ್- ಪ್ರಜ್ವಲ್ ದೇವರಾಜ್ ಸಾಥ್

ಡಿಯರ್ ಸತ್ಯ, ನೂರು ಜನ್ಮಕೂ ಸಿನಿಮಾಗಳ ಖ್ಯಾತಿಯ ನಟ ಆರ್ಯನ್ ಸಂತೋಷ್ (Aryan Santhosh) ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅವರು ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಜರುಗಿತು. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಆನಂದ್ ಗುರೂಜಿ ವಿಶೇಷ ಅತಿಥಿಗಳಾಗಿ ಆಗಮಿಸಿ ಆರ್ಯನ್ ಸಂತೋಷ್ ನಟಿಸಿ, ನಿರ್ದೇಶಿಸುತ್ತಿರುವ ಚೆಂಕೋಲ್ ಸಿನಿಮಾಗೆ ಶುಭ ಹಾರೈಸಿದರು.

ಟೀಸರ್ ಬಿಡುಗಡೆ ಬಳಿಕ ನಟ ಪ್ರಜ್ವಲ್ ದೇವರಾಜ್ (Prajwal Devraj) ಮಾತನಾಡಿ, ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಕದ್ರಿ ಸರ್ ಕೆಲಸ ಬಗ್ಗೆ ನಾನು ಹೇಳುವ ಅವಶ್ಯಕತೆ ಇಲ್ಲ. ಅವರ ಕೆಲಸನೇ ಹೇಳುತ್ತದೆ. ಸಂತೋಷ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ. ಎಷ್ಟೋ ವರ್ಷಗಳಿಂದ ಅವನ ಜರ್ನಿ ಇದೆ. ಸಾಕಷ್ಟು ಕೆಲಸ ಮಾಡಿದ್ದಾನೆ. ಪ್ರತಿ ಕೆಲಸವನ್ನು ಕಣ್ಣಿಗೆ ಒತ್ತಿಕೊಂಡು ದೇವರ ರೀತಿ ಮಾಡುತ್ತಾನೆ. ಟೀಸರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಳ್ಳೆ ಸ್ಟ್ರಾಂಗ್ ಟೀಂ ಸಿಕ್ಕಿದೆ. ಯಾವುದೇ ನಿರ್ದೇಶಕನಿಗೆ ಚಿತ್ರ ಚೆನ್ನಾಗಿ ಇರಬೇಕು ಎಂದರೆ ಸುತ್ತಲು ಇರುವ ತಂಡ ಸ್ಟ್ರಾಂಗ್ ಆಗಿ ಇರಬೇಕು. ಅವ್ರು ನಿಷ್ಠೆಯಿಂದ ಕೆಲಸ ಮಾಡಬೇಕು. ಅಷ್ಟು ಈ ತಂಡದಲ್ಲಿ ಕಾಣಿಸುತ್ತಿದೆ ಎಂದರು.

ನಟ ಆರ್ಯನ್ ಸಂತೋಷ್ ಮಾತನಾಡಿ, ಸ್ನೇಹಿತರ ಜೊತೆ ಕೇರಳದ ವಯನಾಡ್ ನ ಕಾಡಿಗೆ ಹೋದಾಗ ಹೊಳೆದ ಕಥೆ ಇದು. ಅಲ್ಲೊಂದು ಶಿವಲಿಂಗ ನೋಡಿ ಈ ಕಥೆ ರೆಡಿ ಮಾಡಿಕೊಂಡೆ. ನಾನೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸುತ್ತಿದ್ದೇನೆ. ಮನಸ್ವಿ ಮನು, ಶರಣ್ಯ, ಅಕ್ಷಿತಾ ಬೋಪಯ್ಯ ಹಾಗೂ ಪೂಜಾ ಶೆಟ್ಟಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚೆಂಕೋಲ್ ಫ್ಯಾಂಟಸಿ ಡ್ರಾಮಾ ಕಥಾಹಂದರ ಹೊಂದಿದೆ ಎಂದರು.

ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಮತ್ತು ಪಿಕ್ಸಲ್ ಒರಿಜಿನಲ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಆರ್ಯನ್ ಸಂತೋಷ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮಾನಸ್ವಿ, ಶರಣ್ಯ ನಾಯಕಿಯಾಗಿ ನಟಿಸಿದ್ದು, ಅಕ್ಷಿತಾ ಬೋಪಯ್ಯ, ಪೂಜಾ ಶೆಟ್ಟಿ, ರೇಷ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅರುಣಾ ಬಾಲರಾಜ್, ಸುಂದರ್ ವೀಣಾ ಮತ್ತು ಅರವಿಂದ್ ರಾವ್,‌ಮೈಸೂರು ನಂದ, ರಘು, ಸಚಿನ್, ವಿಜಯ್, ವಂಶಿ ಉದಯ್, ಮಹಾಂತೇಶ್ ಹಿರೇಮಠ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ವಿಪಿನ್ ಡಿ ರಾಜ್ ಛಾಯಾಗ್ರಹಣ , ಉಮೇಶ್ ಸಂಕಲನ, ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಹಾಡುಗಳಿಗೆ ಆಲ್ ಓಕೆ, ಜೋ ಕೋಸ್ಟಾ ಮತ್ತು ಗೌತಮ್ ದಾಸ್ ಸಂಗೀತ ಒದಗಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಚೆಂಕೋಲ್ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ‌ ಬರ್ತಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಅಂದಹಾಗೇ ಚೆಂಕೋಲ್ ಎಂದರೆ ರಾಜದಂಡ ಎಂದರ್ಥ.‌ ಮೊದಲ ಭಾಗದಲ್ಲಿ ಡಿಜೆ ಸಂತು ಚೆಂಕೋಲ್ ಬೆಟ್ಟಕ್ಕೆ ಹೋಗುವ ಜರ್ನಿ ಕಟ್ಟಿಕೊಡಲಾಗಿದ್ದು, ಭಾಗ ಎರಡಲ್ಲಿ ಅಗಸ್ತ್ಯ ರಾಜನ ಕಥೆಯನ್ನು ಹೇಳಲಾಗಿದೆ. 1500 ವರ್ಷದ ಹಿಂದಿನ ಕಥೆ ಭಾಗ ಎರಡಲ್ಲಿ ಹೇಳಲಾಗಿದೆ. ಕೇರಳ, ಚಿಕ್ಕಮಗಳೂರು, ಬೆಂಗಳೂರು,‌ ತಮಿಳುನಾಡು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

News Desk Sandalwood Times

error: Content is protected !!