ಏ.24ರಂದು ಡಾಲಿ ನಿರ್ಮಾಣದ ‘ಜೆರಾಕ್ಸ್‌’ ವೆಬ್‌ ಸರಣಿ ರಿಲೀಸ್

ಏ.24ರಂದು ಡಾಲಿ ನಿರ್ಮಾಣದ ‘ಜೆರಾಕ್ಸ್‌’ ವೆಬ್‌ ಸರಣಿ ರಿಲೀಸ್

ಡಾಲಿ (Daali) ಪಿಕ್ಚರ್ಸ್‌ ಬ್ಯಾನರ್ ನಡಿ ಮೂಡಿಬಂದಿರುವ ‘ಜೆರಾಕ್ಸ್’ ವೆಬ್ ಸರಣಿ (Zerox) ಇದೇ ತಿಂಗಳ 24ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಹೀಗಾಗಿ ನಿನ್ನೆ ಬೆಂಗಳೂರಿನ SRV ಥಿಯೇಟರ್ ನಲ್ಲಿ ವೆಬ್ ಸರಣಿ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಿರ್ಮಾಪಕ ಡಾಲಿ ಮಾತನಾಡಿ, ಜೆರಾಕ್ಸ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಈ ಸಿರೀಸ್ ನಲ್ಲಿ ಒಳ್ಳೊಳ್ಳೆ‌ ಕಲಾವಿದರ ದಂಡು ಕೆಲಸ ಮಾಡಿದೆ. ಹೊಸ ಪ್ರತಿಭೆಗಳಿಂದ ಹಿಡಿದು ಅನುಭವಿ ಪ್ರತಿಭೆಗಳು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿರೀಸ್ ಮೊದಲು ನೋಡಿದಾಗ ಬಹಳ ಖುಷಿಯಾಯ್ತು. ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. ಬಹಳ ಖುಷಿಯಿಂದ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ. Zee5ನಿಂದ ಒಳ್ಳೊಳ್ಳೆ ಪ್ರತಿಭೆಗಳಿಗೆ ಫ್ಲಾಟ್ ಫಾರ್ಮ್ ಸಿಗ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ ಎಂದ ಹಾರೈಸಿದರು.

Zee5 ಕನ್ನಡದ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, ZEE5 ಕನ್ನಡದಲ್ಲಿ ವೆಬ್ ಸರಣಿಯನ್ನು ಆರಂಭಿಸಿ ಒಂದು ವರ್ಷವಾಗಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ, ನಾವು ಅಯ್ಯನ ಮನೆಯನ್ನು ಪ್ರಾರಂಭಿಸಿದ್ದೇವು. ನಾವು ಕನ್ನಡ ಮಾತನಾಡುವುದನ್ನು ಮೀರಿ ಅದರ ಸಂಸ್ಕೃತಿ, ಪ್ರದೇಶಗಳು ಮತ್ತು ಜೀವಂತ ವಾಸ್ತವಗಳಲ್ಲಿ ಆಳವಾಗಿ ಬೇರೂರಿರುವ ಕಥೆಗಳನ್ನು ಹೇಳಲು ಆಯ್ಕೆ ಮಾಡಿದ ಪ್ರಯಾಣದ ಆರಂಭವನ್ನು ಗುರುತಿಸಿತು. ಈ ಒಂದು ವರ್ಷದ ಮೈಲಿಗಲ್ಲಿಗೆ ಸರಿಯಾಗಿ, ನಾವು ಈಗ ಏ.24ರಂದು ಜೆರಾಕ್ಸ್ ನ್ನು ಪ್ರೇಕ್ಷಕರಿಗೆ ಮುಂದೆ ತರುತ್ತಿದ್ದೇವೆ, ಆ ಯಶಸ್ಸಿನ ಸರಣಿಯನ್ನು ನಾವು ಮುಂದುವರೆಸುತ್ತೇವೆ. ಈ ವರ್ಷ ನಾವು ಇನ್ನಷ್ಟು ನೆಲಮೂಲದ ವೈವಿಧ್ಯಮಯ ಮತ್ತು ವಿಭಿನ್ನ ಕನ್ನಡ ಕಥೆಗಳು ಮತ್ತು ವಿಭಿನ್ನ ಸ್ವರೂಪಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ವೆಬ್ ಸರಣಿಯ ಮುಖ್ಯಸ್ಥ ಆರ್.ಜೆ.ಪ್ರದೀಪ್ ಮಾತನಾಡಿ, ಕರ್ನಾಟಕದ ಬೇರೆ ಭಾಗಗಳನ್ನು ಹೇಗೆ ಪ್ರತಿನಿಧಿಸುತ್ತೇವೆ ಎನ್ನುವುದು‌ zee5 ಕನ್ನಡದ ಉದ್ದೇಶವಾಗಿತ್ತು. ಅಯ್ಯನ‌ ಮನೆ ಮೂಲಕ ನಮ್ಮ ವೆಬ್ ಸಿರೀಸ್ ಜರ್ನಿ ಶುರುವಾಯ್ತು. ಬಳಿಕ ಮಾರಿಗಲ್ಲು, ಶೋಧ ನಂತರ ರಾಕ್ಷಸ ವೆಬ್ ಸಿರೀಸ್ ಮಾಡಿದೆವು. ಎಲ್ಲವೂ ಥ್ರಿಲ್ಲರ್ ವೆಬ್ ಸೀರೀಸ್ ಆಯ್ತು. ಅದನ್ನು ಬ್ರೇಕ್ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಶ್ರೀನಿಧಿಯವರು. ಅವ್ರು ಬಂದು ಕಥೆ ಹೇಳಿದರು. ಅದ್ರಲ್ಲಿ ಜೆರಾಕ್ಸ್ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದಾಗ ಏನಾಗುತ್ತದೆ ಎಂಬ ಲೈನ್ ಬಹಳ ಇಷ್ಟವಾಯ್ತು. ನಮ್ ಟೀಂ, ಅವ್ರ ಟೀಂ ಕಥೆ ಮಾಡಿಕೊಂಡೆವು. ಬಳಿಕ ಧನಂಜಯ್ ಅವ್ರನ್ನು ಅಪ್ರೋಚ್ ಮಾಡಿದೆವು. ಅವ್ರು ಕಥೆ ಕೇಳಿ ಸಖತ್ ಆಗಿದೆ ಸಿನಿಮಾ ಮಾಡೋಣಾ ಎಂದರು. ಒಳ್ಳೆ ಕಥೆ, ಒಳ್ಳೆ ಟೀಂ ಸೇರಿಸುವ ಪ್ರಯತ್ನ ಇದು. ಈ ಜರ್ನಿ ಹೀಗೆ ಮುಂದುವರೆಯಲಿದೆ. ಜೆರಾಕ್ಸ್ ಒಂದು ವಿಭಿನ್ನ ಪ್ರಯತ್ನ. ಎಪಿಸೋಡ್ ನೋಡಿ ಲಾಜಿಕ್ ಹುಡುಕಬೇಡಿ. ಇದೊಂದು ಸೈಫೈ ಸಿಗ್ಮೆಂಟ್ ಎಂದರು.

ನಟ ನಾಗಭೂಷಣ್ ಮಾತನಾಡಿ, ವೆಬ್ ಸಿರೀಸ್ ಫ್ಲಾಟ್ ಫಾರ್ಮ್ ನನಗೆ ಹೊಸದೇನು ಅಲ್ಲ. ಹನಿಮೂನ್ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದೆ. ಅದರ ನಿರ್ಮಾತೃ ಆರ್ ಜೆ ಪ್ರದೀಪ್ ಅವರು. ಇಷ್ಟು ವರ್ಷ ಆದ್ಮೇಲೆ ಮತ್ತೆ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ಸಿನಿಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಒಟಿಟಿಗಳು ಹಿಂದೇಟು ಹಾಕುತ್ತಿದ್ದಾರೆ. ಅವ್ರು ಅದಕ್ಕೆ ಕೊಡುವ ಉತ್ತರ ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು. ಆದರೆ ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀವರ್ಸ್ ಇದ್ದಾರೆ ಅನ್ನೋದನ್ನು zee5 ತೋರಿಸಿಕೊಟ್ಟಿದೆ. ಜೆರಾಕ್ಸ್ ವೆಬ್ ಸರಣಿಯಲ್ಲಿ ನನ್ನದು ಪ್ರಕಾಶ್ ಪಾತ್ರ. ಶ್ರೀನಿಧಿ ಅದ್ಭುತ ಟೆಕ್ನಿಷಿಯನ್. ಒಳ್ಳೆ ಕಥೆಗಾರ. ಸೋಲು ಗೆಲುವು ತಲೆಕೆಡಿಸಿಕೊಳ್ಳದೆ ಕಂಟಿನ್ಯೂ ಆಗಿ ಧನಂಜಯ್ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಅದ್ಭುತ ಪ್ರಾಡಕ್ಟ್ ಹೊರತರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು.

‘ಬ್ಲಿಂಕ್‌’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿರುವ ‘ಜೆರಾಕ್ಸ್‌ʼ ಸರಣಿಯನ್ನು ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶ್ವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಪ್ಪಿ ತಪ್ಪಿ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದುಬಿಟ್ಟರೆ ಏನಾಗುತ್ತೆ? ಈ ಎಳೆಯನ್ನೇ ಇಟ್ಟುಕೊಂಡು ತಯಾರಾಗಿರುವ ಹಾಸ್ಯಭರಿತ ವೆಬ್ ಸೀರೀಸ್‌ ‘ಜೆರಾಕ್ಸ್’. ಡಾರ್ಕ್ ಕಾಮಿಡಿ, ಥ್ರಿಲ್ಲರ್, ಫ್ಯಾಂಟಸಿ ಅಂಶಗಳನ್ನ ಒಳಗೊಂಡಿದೆ. zee5ನಲ್ಲಿ ಇದೇ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ಪ್ರೇಕ್ಷಕರಿಗೆ ನಗೆಯ ಊಟ ಉಣಬಡಿಸಲಿದೆ.

News Desk Sandalwood Times

error: Content is protected !!