50 ದಿನ ಪೂರೈಸಿದ ‘ಲವ್ ಮಾಕ್ಟೇಲ್ 3’ ಚಿತ್ರ
ಡಾರ್ಲಿಂಗ್ ಕೃಷ್ಣ (Darling Krishna) ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್೩ ಚಿತ್ರ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿಕೊಂಡಿದೆ. ಯಶಸ್ವಿಯಾಗಿ 50 ದಿನ ಪೂರೈಸಿಕೊಂಡಿರೋ ಸಂಭ್ರಮವೀಗ ಚಿತ್ರತಂಡವನ್ನು ಎದುರುಗೊಂಡಿದೆ. ಈ ಸಲುವಾಗಿ ಇಂಥಾದ್ದೊಂದು ರೋಮಾಂಚಕ ಗೆಲುವು ತಂದುಕೊಟ್ಟ ಪ್ರೇಕ್ಷಕರಿಗೆಲ್ಲ ಡಾರ್ಲಿಂಗ್ ಕೃಷ್ಣ ಧನ್ಯವಾದ ಸಲ್ಲಿಸಿದ್ದಾರೆ.

ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. 50 ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ತನ್ನ ಆಂತರ್ಯದ ಕಸುವಿನಿಂದಲೇ ಎದುರಿಸಿದ ‘ಲವ್ ಮಾಕ್ಟೇಲ್ 3’ ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ (Milana Nagaraj ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

