ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಪಯಣಕ್ಕೆ 20 ವರ್ಷಗಳ- ‘ಪಿನಾಕ’ ಸೆಟ್ನಲ್ಲಿ ಅದ್ಧೂರಿ ಗೌರವ
ಸ್ಯಾಂಡಲ್ವುಡ್ನ ಅಪ್ರತಿಮ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಕಳೆದ ಎರಡು ದಶಕಗಳಿಂದ ಪ್ರೇಕ್ಷಕರಿಂದಲೂ ಅತಿ ಹೆಚ್ಚು ಪ್ರೀತಿಯನ್ನೂ ಗಳಿಸಿದ್ದಾರೆ ಈ ನಟ. ಈ ವಿಶೇಷ ಮೈಲಿಗಲ್ಲನ್ನು ಅವರ ಬಹುನಿರೀಕ್ಷಿತ ಚಿತ್ರ ‘ಪಿನಾಕ’ ಚಿತ್ರೀಕರಣದ ಸೆಟ್ನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಿನಾಕ’ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಇದೇ ವೇಳೆ ಚಿತ್ರದ ನಿರ್ಮಾಪಕರಾದ ಟಿಜಿ ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್, ಗಣೇಶ್ ಅವರ ದೀರ್ಘಕಾಲದ ಸಾಧನೆಯನ್ನು ಸ್ಮರಿಸಿ, ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಚಿತ್ರೀಕರಣದ ಸ್ಥಳದಲ್ಲೇ ಕೇಕ್ ಕತ್ತರಿಸಿ, ಇಡೀ ಚಿತ್ರತಂಡದ ಸಮ್ಮುಖದಲ್ಲಿ ಗಣೇಶ್ ಅವರಿಗೆ ಅಭಿನಂದನೆಗಳನ್ನು ತಿಳಿಸಲಾಯಿತು.

ಪೀಪಲ್ ಮೀಡಿಯಾ ಫ್ಯಾಕ್ಟರಿಯ ಈ ಮಹತ್ವಾಕಾಂಕ್ಷೆಯ ಚಿತ್ರವು ಭಾರಿ ವೆಚ್ಚದಲ್ಲಿ ಮತ್ತು ಅದ್ಧೂರಿ ತಾರಾಗಣದೊಂದಿಗೆ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಶೇ. 80 ಭಾಗದ ಶೂಟಿಂಗ್ ಮುಕ್ತಾಯವಾಗಿದ್ದು, ಸಿನಿಮಾ ಅತ್ಯಂತ ಅದ್ಭುತವಾಗಿ ಮೂಡಿಬರುತ್ತಿದೆ. ವಿವಿಧ ಭಾಷೆಗಳ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಒಂದಾಗುತ್ತಿದ್ದು, ಇದು ಗಣೇಶ್ ಅವರ ಕೆರಿಯರ್ನಲ್ಲೇ ಅತಿ ದೊಡ್ಡ ಸಿನಿಮಾವಾಗಲಿದೆ. ತಾಂತ್ರಿಕವಾಗಿ ಮತ್ತು ಮೇಕಿಂಗ್ ವಿಚಾರದಲ್ಲಿ ರಾಜಿಯಾಗದೆ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದೆ. ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಅವರು, ತಮ್ಮ 20 ವರ್ಷಗಳ ಪ್ರಯಾಣದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ನಾನು ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು. ಅಂದು ನನ್ನನ್ನು ಹೇಗೆ ಸ್ವೀಕರಿಸಿದ್ದಿರೋ, ಅದೇ ಪ್ರೀತಿ ಮತ್ತು ವಿಶ್ವಾಸವನ್ನು ಇಂದಿಗೂ ಚಿತ್ರರಂಗದವರು ಹಾಗೂ ನನ್ನ ಅಭಿಮಾನಿಗಳು ತೋರಿಸುತ್ತಿದ್ದಾರೆ. ಕಾಲ ಉರುಳಿದರೂ ನನ್ನ ಅಭಿಮಾನಿ ಬಳಗ ಇನ್ನೂ ದೊಡ್ಡದಾಗುತ್ತಿರುವುದು ನನ್ನ ಪುಣ್ಯ. ಎಲ್ಲರಿಗೂ ನನ್ನ ನಮಸ್ಕಾರಗಳು. ಹಾಗೆಯೇ, ನನ್ನನ್ನು ಇಷ್ಟು ಗೌರವದಿಂದ ನಡೆಸಿಕೊಳ್ಳುತ್ತಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದು, ಈಗ ಕನ್ನಡದಲ್ಲಿ ‘ಪಿನಾಕ’ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಗಣೇಶ್ ಅವರ ವೃತ್ತಿಜೀವನದ ಈ ಸಂಭ್ರಮದ ಘಟ್ಟವು ‘ಪಿನಾಕ’ ಚಿತ್ರದ ಯಶಸ್ಸಿಗೆ ಮತ್ತಷ್ಟು ಮುನ್ನುಡಿ ಬರೆದಿದೆ.

